ಜೈಪುರ: ತಿಂಗಳಿಗೆ ಕೇವಲ 10 ಸಾವಿರ ರೂಪಾಯಿ ಸಂಬಳ ಪಡೆಯುವ 22 ವರ್ಷದ ಯುವಕನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ಕಾಣಿಸಿಕೊಂಡಿರುವ ಅಚ್ಚರಿಯ ಘಟನೆ ರಾಜಸ್ಥಾನದ ಸಿಕಾರ್‌ನಲ್ಲಿ ವರದಿಯಾಗಿದೆ. ಆದರೆ, ಈ ಭಾರಿ ಮೊತ್ತ ಯುವಕನಿಗೆ ಸಂತಸ ತರುವ ಬದಲು ಆತಂಕಕ್ಕೆ ಕಾರಣವಾಗಿದೆ.

ರಾಜಸ್ಥಾನದ ಸಿಕಾರ್‌ನ ಸಲಾಸರ್ ಬಸ್ ನಿಲ್ದಾಣದ ಸಮೀಪವಿರುವ ನಿರ್ಮಲ್ ಮೆಡಿಕಲ್ ಪಾಯಿಂಟ್‌ನಲ್ಲಿ ಕೆಲಸ ಮಾಡುತ್ತಿರುವ ಸಮೀರ್ ಖಾನ್ ಈ ವಿಚಿತ್ರ ಅನುಭವಕ್ಕೆ ಒಳಗಾದ ಯುವಕ. ತಿಂಗಳಿಗೆ 10 ಸಾವಿರ ರೂಪಾಯಿ ವೇತನ ಪಡೆಯುವ ಸಮೀರ್, ಬುಧವಾರ ತಮ್ಮ ಮೊಬೈಲ್‌ಗೆ ರೀಚಾರ್ಜ್ ಮಾಡಲು ಬ್ಯಾಂಕಿಂಗ್ ಆ್ಯಪ್ ತೆರೆದಿದ್ದರು.

ಬ್ಯಾಂಕ್ ಬ್ಯಾಲೆನ್ಸ್ ನೋಡಿ ಯುವಕನಿಗೆ ಶಾಕ್!

ಮೊಬೈಲ್ ರೀಚಾರ್ಜ್ ಮಾಡುವ ಉದ್ದೇಶದಿಂದ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಿದ ಸಮೀರ್‌ಗೆ ಖಾತೆಯಲ್ಲಿ ಶೂನ್ಯ ರೂಪಾಯಿ ತೋರಿಸಿರುವುದು ಕಂಡುಬಂದಿದೆ. ಇದರಿಂದ ಆತಂಕಗೊಂಡ ಅವರು ಖಾತೆಯ ವಿವರಗಳನ್ನು ಪರಿಶೀಲಿಸಿದಾಗ, 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತದ ಮೇಲೆ ಲಿಯನ್ ವಿಧಿಸಿರುವುದು ಗಮನಕ್ಕೆ ಬಂದಿದೆ.

ಅಷ್ಟೇ ಅಲ್ಲದೆ, ಸಮೀರ್ ಅವರ ಖಾತೆಯಲ್ಲಿದ್ದ ಸ್ವಂತ ಹಣವಾದ 55 ಸಾವಿರ ರೂಪಾಯಿಯನ್ನೂ ಬಳಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸೈಬರ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಯುವಕ

ಬ್ಯಾಂಕ್ ಖಾತೆಯಲ್ಲಿನ ಈ ವಿಚಿತ್ರ ಬೆಳವಣಿಗೆಯಿಂದ ಗಾಬರಿಗೊಂಡ ಸಮೀರ್, ತಕ್ಷಣವೇ ತಮ್ಮ ಉದ್ಯೋಗದಾತ ಧೀರಜ್ ಶರ್ಮಾ ಅವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಇಬ್ಬರೂ ಸಿಕಾರ್‌ನ ಸೈಬರ್ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರಗಳನ್ನು ತಿಳಿದುಕೊಂಡ ಪೊಲೀಸರು, ಈ ಸಮಸ್ಯೆಗೆ ಸಂಬಂಧಿಸಿದಂತೆ ಬ್ಯಾಂಕ್ ಅಧಿಕಾರಿಗಳನ್ನು ನೇರವಾಗಿ ಸಂಪರ್ಕಿಸುವಂತೆ ಸಲಹೆ ನೀಡಿದ್ದಾರೆ.

₹10 ಸಾವಿರ ಕೋಟಿಯ ಹಿಂದಿನ ಅಸಲಿ ಕಾರಣವೇನು?

ಪೊಲೀಸರ ಸಲಹೆಯಂತೆ ಸಮೀರ್ ಬ್ಯಾಂಕ್ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ತಾಂತ್ರಿಕ ದೋಷದಿಂದಾಗಿ ಖಾತೆಯಲ್ಲಿ ಈ ರೀತಿಯ ಸಮಸ್ಯೆ ಉಂಟಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಬ್ಯಾಂಕ್ ಅಧಿಕಾರಿಗಳು ಸಮಸ್ಯೆಯನ್ನು ಪರಿಶೀಲಿಸಿ ತಾಂತ್ರಿಕ ದೋಷವನ್ನು ಸರಿಪಡಿಸಿದ್ದಾರೆ. ಬಳಿಕ ಸಮೀರ್ ಖಾನ್ ಅವರ ಖಾತೆಯಲ್ಲಿ ಇರಬೇಕಾದ ನೈಜ ಹಣದ ಮೊತ್ತವನ್ನು ಮರುಸ್ಥಾಪಿಸಲಾಗಿದೆ.

ತಾಂತ್ರಿಕ ದೋಷದಿಂದ ಭಾರಿ ಗೊಂದಲ!

ಒಟ್ಟಿನಲ್ಲಿ, ತಿಂಗಳಿಗೆ 10 ಸಾವಿರ ರೂಪಾಯಿ ಸಂಬಳ ಪಡೆಯುವ ಯುವಕನ ಬ್ಯಾಂಕ್ ಖಾತೆಯಲ್ಲಿ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ಮೊತ್ತಕ್ಕೆ ಸಂಬಂಧಿಸಿದ ಲಿಯನ್ ಕಾಣಿಸಿಕೊಂಡಿರುವ ಘಟನೆ ಅಚ್ಚರಿ ಮೂಡಿಸಿದೆ.

ಆದರೆ, ಯುವಕನ ಖಾತೆಗೆ ನಿಜವಾಗಿಯೂ 10 ಸಾವಿರ ಕೋಟಿ ರೂಪಾಯಿ ಜಮೆಯಾಗಿರುವುದು ದೃಢಪಟ್ಟಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯ ತಾಂತ್ರಿಕ ದೋಷದಿಂದ ಈ ಗೊಂದಲ ಉಂಟಾಗಿದ್ದು, ಸಮಸ್ಯೆ ಸರಿಪಡಿಸಿದ ಬಳಿಕ ಯುವಕ ನಿರಾಳರಾಗಿದ್ದಾರೆ.